Monday, 26 August 2013

ಕಹಿ ಕನಸಿನ ಅನುಭವ ........ !!

ಈ ರಾತ್ರಿ ಕಂಡ ಕನಸು ಕಪ್ಪು ಬಿಳುಪು
ಆದರೂ ಇದ್ದಂತಿತ್ತು ಕೆಂಬಣ್ಣ ಒಂಚೂರು
ಕಥೆಯಾದಲ್ಲಿ ಇಲ್ಲಿರಲಿಲ್ಲ ನಾಯಕಿ
ಅರಿಯದ ಊರಲ್ಲಿ ಉದ್ದುದ್ದ ಗೋಡೆಗಳು

ವಾಹನದಿಂದಿಳಿದೊಡನೆ ನಾಲ್ಕಾರು ಹೆಜ್ಜೆ
ಹಿಂತಿರುಗಿ ನೋಡಲಲ್ಲಿ ನಮ್ಮವರು ಕಣ್ಮರೆ
ಭಯದಲ್ಲಿ ರಸ್ತೆಯತ್ತ ಓಡಿ ಹೋದೊಡನೆ
ಕಂಡರು ನಮ್ಮವರೆಲ್ಲರೂ ವಾಹನದ ಬಳಿ

ಅದೇನೋ ಸಿಕ್ಕಂತೆ ಎದೆಯೊಳಗೆ ತಳಮಳ
ಮುಂದೆ ಹೋಗೆಂದ ಅಮ್ಮನ ಮಾತಿಗೆ ಒಪ್ಪಿ
ತಿರುಗಿ ಹೋಗುತ್ತಿದ್ದಾಗ ಅಪ್ಪ ಕೂಗಿದಂತಾಗಿ
ಪುನಃ ಹಿಂತಿರುಗಿ ನೋಡಲಲ್ಲಿ ಯಾರೂ ಇಲ್ಲ

ಆ ಸ್ಥಳವ್ಯಾವುದೋ ಈ ಮೊದಲು ಕಂಡಿರಲಿಲ್ಲ
ಜೊತೆಗೊಂದು ವಿಸ್ಮಯ ಈಗಲ್ಲಿ ವಾಹನವೂ ಇಲ್ಲ
ಮತ್ತಷ್ಟು ಭಯದಲ್ಲಿ ಮತ್ತೆ ಓಡಿದೆ ರಸ್ತೆಯ ಬಳಿ
ಕಂಡರು ಎಲ್ಲರೂ ವಾಹನದ ಬಳಿ ನಗುನಗುತ

ನಾಲ್ಕಾರು ಹೆಜ್ಜೆ ನಡೆದೊಡನೆ ಕಣ್ಮರೆಯಾಗುವ
ಮರಳಿ ಬಂದೊಡನೆ ಕಣ್ಮುಂದೆ ಕಾಣುವ ಆ ಸ್ಥಳ
ಯಾವುದೆಂಬ ಕುತೂಹಲದ ಜೊತೆಯಲ್ಲಿ ಭಯ
ಸಿಹಿ ಕನಸುಗಳ ಬದಲು ಕಹಿ ಕನಸಿನ ಅನುಭವ  ........ !!

*ಪಿಪಿಕೆ*

----------------------------------------------------------------------
(ಕನಸಲ್ಲಿ ಕಂಡದ್ದು .. ಒಪ್ಪಿಗೆಯಾಗುವ ಚಿತ್ರ ಸಿಗದ ಕಾರಣ ಇಲ್ಲಿ ಚಿತ್ರವಿಲ್ಲ ... )

Sunday, 25 August 2013

ಅನಾಥರು ..... !!

ಎ ಸೈಲೆಂಟ್ ಲವ್ ಸ್ಟೋರಿ





ನಾನು ಪ್ರಶಾಂತ
ಆಕೆಯೂ ಶಾಂತ
ಮೆಚ್ಚಿರಲು ಮನ
ಪ್ರೀತಿಯ ಜನನ.... !!

ಏಕಾಂತ ಪ್ರಿಯ ನಾನು
ಸ್ವಭಾವದಲ್ಲಿ ಮೌನಿ
ಅವಳೂ ಕೂಡ ನನ್ನಂತೆ
ಸ್ವಭಾವದಲ್ಲಿ ಸೌಮ್ಯ.... !!

ಮಾತಿಗೆ ಮಾತು ಬೆಳಯಲಿಲ್ಲ
ಹುಟ್ಟಿದ ಪ್ರೀತಿಯೂ ಬೆಳೆಯಲಿಲ್ಲ
ಮಾತಿಲ್ಲವೆಂದು ನೋವಿರಲಿಲ್ಲ
ಆದರೂ ಪ್ರೀತಿಯು ಸತ್ತಿರಲಿಲ್ಲ.... !!

ಕೊನೆ ಮಾತು ಇಬ್ಬರಿಂದಲೂ
ಮದುವೆಯ ಶುಭಾಶಯಗಳು
ದಿನವಿಲ್ಲಿ ಅದಲು ಬದಲು
ಅಂತೆಯೇ ಗಂಡು ಹೆಣ್ಣುಗಳು..... !!

ನಾಲ್ವರೂ ಈಗ ಪ್ರೀತಿ ಇಲ್ಲದೇ .... 

ಅನಾಥರು ..... !!


*ಪಿಪಿಕೆ*

ಅದು ಅಪರಿಚಿತ.... !!



ಎರಡು ನಿಮಿಷಗಳ ಮೌನ
ಕಾಳಗದಲ್ಲಿ ಮಡಿದ ಸೇವಕನಿಗಾಗಿ
ಎರಡು ದಿನಗಳ ರಜಾ
ಐಶಾರಾಮಿ ಬದುಕಿನ ನಾಯಕನಿಗಾಗಿ.... !!

ಎಲ್ಲೋ ಏನೋ ಹುಡುಕಲು ಹೋಗಿ
ಸಿಗಲಿಲ್ಲವಾದರೂ ಬದುಕು ಸಾಗಬೇಕು
ಎಲ್ಲೋ ನಡೆದ ಸುದ್ಧಿ ಕೇಳಿ ಭಯವಾಗಿ
ಸಿಕ್ಕರೂ ಸ್ವಾತಂತ್ರ್ಯ, ಮತ್ತೆ ಹೋರಾಡಬೇಕು... !!

ಹೇಳಲು ನಾವು ಭಾರತೀಯರೆಂಬ ಮಾತು
ರಾಜ್ಯ ದಾಟಿದೊಡನೆಯೇ ಬರಬಹುದು ಆಪತ್ತು
ಹುಟ್ಟಿನಿಂದಲೇ ಸಂಬಂಧಗಳ ಸರಪಳಿ ಬಿಗಿತ
ಹೊರ ಜಗತ್ತು ನಮ್ಮದಾದರೂ ಅದು ಅಪರಿಚಿತ.... !!

*ಪಿಪಿಕೆ*

Sunday, 18 August 2013

ಹಳ್ಳಿಯ ಹುಡುಗಿಯ





ಹಳ್ಳಿಯ ಹುಡುಗಿಯ
ಮೆಲ್ಲನೆ ನಡಿಗೆಯ
ನೋಡುತ್ತ ನಾ ನಿಂತೆ
ಆದರೆ
ಮನದಲ್ಲಿ ಬೇರೇನೋ ಚಿಂತೆ

ಹೊಲವೆಲ್ಲಾ ಹಸಿರು
ಕಾಲುದಾರಿ ಕೆಸರು
ಕಲ್ಲುಮುಳ್ಳು ಒಂಚೂರು
ಹೆಜ್ಜೆ ಹೆಜ್ಜೆಗೂ ಹುಷಾರು

ಹತ್ತಾರು ಯೋಜನೆಗಳು
ಹಲವಾರು ಮಂತ್ರಿಗಳು
ಹಾಳೆಯ ಲೆಕ್ಕದ ರಸ್ತೆಗಳು
ಹುಟ್ಟಲು ಕಾದಿವೆ ಹಗಲಿರುಳು

ಏನೇನೋ ನೆನೆಯುತ್ತ
ಮತ್ತೊಮ್ಮೆ ಅವಳತ್ತ
ಏರಿಳಿತ ಎದೆ ಬಡಿತ 
ಪ್ರೀತಿಯ ತಕದಿಮಿತ 

ಹಳ್ಳಿಯ ಹುಡುಗಿಯ
ಮೆಲ್ಲನೆ ನಡಿಗೆಯ 
ನೋಡುತ್ತ ನಾ ನಿಂತೆ
ಆದರೆ
ಮನದಲ್ಲಿ ಬೇರೇನೋ ಚಿಂತೆ.... !!

*ಪಿಪಿಕೆ*