Tuesday 31 July 2012

ಸಿಹಿ ಮುತ್ತು ಬೇಕು ಮತ್ತೊಂದು .. :)



ಸಿಹಿ ಮುತ್ತು ಬೇಕು ಮತ್ತೊಂದು
*****************************

ಬರೆಯಲೊಂದು ಗೀತೆಯ
ಗೆಳತಿಗಿಷ್ಟವಾದ ಕವಿತೆಯ
ಹೃದಯದಾಳದ ಕೋರಿಕೆಯ
ಸೇರಿಸಿ ಸಾಲು ಸಾಲು ಪ್ರೀತಿಯ

ಮೆಚ್ಚಿ ಕೊಟ್ಟಳು ಮುತ್ತೊಂದ
ಬರೆಯಲು ಹೇಳಿ ಮತ್ತೊಂದ
ಆ ಮತ್ತಲಿ ಬಂತು ಮಾತೊಂದು
ಸಿಹಿ ಮುತ್ತು ಬೇಕು ಮತ್ತೊಂದು

ಮುತ್ತಿನ ಮತ್ತಲಿ ಗೀಚಿದೆ ಸಾಲೊಂದು
ಮಾಡಿದೆ ಚಿಂತೆಯ ಮುಂದೇನೆಂದು
ಗೀಚಿದೆ ಗೆರೆಗಳ ಮನದಲ್ಲೇ ನೊಂದು
ಅವಳದೇ ಚಿತ್ರವ ಬರೆದೆ ನಾನಂದು

ಚಿತ್ರವ ಕಂಡು ಖುಷಿಯಾಗಿ ಕುಣಿದಳು
ಹತ್ತಿರ ಕರೆದು ಮುತ್ತೆರಡು ಕೊಟ್ಟಳು
ಮತ್ತೊಂದು ಚಿತ್ರ ಬರೆಯಲು ಹೇಳಿದಳು
ನಾಲ್ಕು ಮುತ್ತಿನ ಆಸೆಯ ಹುಟ್ಟಿಸಿದಳು

ನಾಲ್ಕು ಮುತ್ತುಗಳ ಕನಸು ಕಾಣುತ
ನಾ ಕುಂಚ ಹಿಡಿದೆ ಅವಳ ನೋಡುತ
ನಾನೇನ ಬರೆಯಲೆಂದು ಚಿಂತಿಸುತ
ನಾ ಗುನುಗಿದೆ ಹಳೆ ಕವಿತೆ ನೆನೆಯುತ

ಕೇಳಿ ನುಡಿದಳು ಕವಿತೆಯ ಹಾಡೀಗ
ಹಾಡಿದೆ ನಾನಾಗ ಅಲ್ಲಿ ಹೊಸರಾಗ
ಮೆಚ್ಚಿ ನಾಲ್ಕು ಮುತ್ತಿಟ್ಟು ಬೇಗ ಬೇಗ
ಹಾಡಲು ಹೇಳಿದಳು ಮತ್ತೊಂದ ಆಗ

ಕವಿತೆಗೊಂದು , ಚಿತ್ರಕ್ಕೆರಡು ಮುತ್ತು
ಹಾಡಿಗಾಗಿ ಕೊಟ್ಟದ್ದು ನಾಲ್ಕು ಮುತ್ತು
ಲೆಕ್ಕ ಹಾಕಿದಾಗಲ್ಲಿ ಏಳು ಸಿಹಿ ಮುತ್ತು
       ಮತ್ತೊಂದ ಹಾಡಲು ಎಂಟು ಮುತ್ತು .. :)

 || ಪ್ರಶಾಂತ್ ಖಟಾವಕರ್ ||



Sunday 29 July 2012

ಹೇಳೇ ಈಗ ಓ ಹೋ ನೀನ್ಯಾರೇ...... !!




ಯಾರೇ ನೀನು ಯಾರೇ ನೀನು
ಹೇಳೇ ಈಗ ಓ ಹೋ ನೀನ್ಯಾರೇ...... !!


ನೀನ್ಯಾಕೆ ಬರ್ತೀಯೇ
ನನ್ನೆದುರಲ್ಲಿ ಕುಣಿತೀಯೇ
ನಾನೆದ್ದು ಹಾಡಿದರೆ
ನೀನೆಲ್ಲೋ ಮರೆಯಾಗುವೆ
ಓ ಎನ್ನ ಕನಸಿನ ಚೆಲುವೆ
ನೀ ಹಿಂಗ್ಯಾಕೆ ಮಾಡುವೆ


ಮಾಡ್ತೀನಿ ಬಾಟ್ಲಿ ಮೇಲಾಣೆ
ಸುಳ್ಳಲ್ಲ ಮಾತು ಓ ಜಾಣೆ
ಯಾಕ್ ಹಿಂಗೆ ಅಯ್ಯೋ ನಾ ಕಾಣೆ
ನೀನಿಲ್ಲದ್ ಮನಸ್ಸು ಕತ್ತಲ ಕೋಣೆ


ಒಂದೊಂದೇ ಅಕ್ಷರ
ಕಲಿತೀನಿ ನಿನಗಾಗಿ
ನಿನ್ ಭಾಷೆ ಇಷ್ಟಾನೆ
ಪ್ರೀತಿಗೆ ಹೊಸಬ ಕಣೇ


ಹೇಳ್ಕೊಟ್ರೆ ಕಲಿತೀನಿ
ನಿನ್ ಪ್ರೀತಿ ಸಿಕ್ರೆ
ಈ ಬಾಟ್ಲೀನು ಬಿಡ್ತೀನಿ
ನಿನ್ ಕೈ ಹಿಡಿತೀನಿ
ಕೊನೆತನಕ ಬಿಡೋಲ್ಲ
ಈ ಮಾತು ಸುಳ್ಳಲ್ಲ


ಬಾಟ್ಲಿ ಇದ್ದಾಗ ಕೈಯಲ್ಲಿ
ಸುಳ್ಳು ಬರೋಲ್ಲ ಬಾಯಲ್ಲಿ
ಬೇಗ ನೀ ಹತ್ರ ಬಾ ಇಲ್ಲಿ
ಕೊಡ್ತೀನಿ ಹೃದಯಾನ
ಹೇಳ್ತೀನಿ ಪ್ರೀತಿ ಹಾಡನ್ನ


ಯಾರೇ ನೀನು ಯಾರೇ ನೀನು
ಹೇಳೇ ಈಗ ಓ ಹೋ ನೀನ್ಯಾರೇ...... !!


|| ಪ್ರಶಾಂತ್ ಖಟಾವಕರ್ ||

ಚಿತ್ರ ನೋಡುತ ವಿಚಿತ್ರ ಕವನ

ಚಿತ್ರ ನೋಡುತ ವಿಚಿತ್ರ ಕವನ
****************************



ಆಹಾ ಆಹಾ ಇದೇನಿದೇನಿದು ಮಾಯೆ
ಕಪ್ಪು ಬಿಳುಪಿನ ಏರುಪೇರಿನ ಛಾಯೆ .. !!

ನಿನ್ನ ನೋಡುತ ನೋಡುತ ತಿರುಗುತ್ತಿದೆ
ನನ್ನ ತಲೆಯಲ್ಲಿ ಪ್ರಶ್ನೆಯು ಹುಟ್ಟುತ್ತಿದೆ
ನಿನ್ನ ಉಗಮ ಎಲ್ಲಿ , ಅಂತ್ಯವು ಎಲ್ಲಿದೆ
ನನ್ನ ಚಿಂತೆಗೆ ನೀನೆ ಜಾದೂ ಮಾಡಿದೆ

ನಿನ್ನೊಳಗೇನೋ ಅಡಗಿದೆ ಎಂದು
ನನ್ನೆದೆಯಾಳದಲ್ಲಿ ಕಾಡಿದೆ ಇಂದು
ನಿನ್ನೊಳಿರುವ ಸುತ್ತುಗಳ ಎಣಿಸಲೆಂದು
ನನ್ನೆಲ್ಲಾ ಪ್ರಯತ್ನವು ವಿಫಲವಾಯಿತಿಂದು

ನಿನ್ನ ಕಪ್ಪು ಬಿಳುಪಿನ ಈ ಅವತಾರ
ನನ್ನ ತಪ್ಪು ಸರಿಗಳ ಜೀವನ ವಿಚಾರ
ನಿನ್ನ ಸುತ್ತ ಸುತ್ತುವ ಚುಕ್ಕಿಗಳು ಅಪಾರ
ನನ್ನ ಚಿತ್ರ ವಿಚಿತ್ರ ಕಲ್ಪನೆಗಿಲ್ಲಿ ನೀನೆ ಆಧಾರ .. :)

|| ಪ್ರಶಾಂತ್ ಖಟಾವಕರ್ ||




Saturday 28 July 2012

ಹಳೇ ರಾಗ ಹೊಸ ಸಾಲು .. ಯಾರಿಗ್ ಒತ್ತೋಣ ನಮ್ಮ ಓಟನ್ನು.. ??


ಹಳೇ ರಾಗ ಹೊಸ ಸಾಲು .. ತುಂಬಾ ದಿನಗಳ ನಂತರ .. ಲೈಫು ಇಷ್ಟೇನೆ .. ಯಾರಿಗೆಳೋಣ ನಮ್ಮ ಪ್ರಾಬ್ಲಮ್ಮು .. ಅದೆಷ್ಟು ಸರಿಯೋ ಅದೆಷ್ಟು ತಪ್ಪೋ ... !!!
ಒಟ್ಟಿನಲ್ಲಿ ಆ ಹಾಡನ್ನು ನಿಮ್ಮೆಲ್ಲರ ಮುಂದೆ ....
ಯಾರಿಗ್ ಒತ್ತೋಣ ನಮ್ಮ ಓಟನ್ನು
ರಾಜಕೀಯ ಗೊತ್ತೇ ಇಲ್ಲ ನಮಗಿನ್ನೂ..........>>>>


ಮಾತ್ರೆಗಳನ್ನು ಲೆಕ್ಕ ಹಾಕಿಲ್ಲ .. ಇಲ್ಲಿ ಕೇವಲ ಹಾಡನ್ನು ಫೀಲ್ ಮಾಡ್ಕೊಂಡು ಬರೆದದ್ದು ಅಷ್ಟೇ .. :)
ಇಷ್ಟಾ ಆದ್ರೆ .. ಕಾಮೆಂಟ್ ಮಾಡಿ .. ಥ್ಯಾಂಕ್ ಯೂ ಇನ್ ಅಡ್ವಾನ್ಸ್ ... ಧನ್ಯವಾದಗಳು .. :)


***********************************************
ಯಾರಿಗ್ ಒತ್ತೋಣ ನಮ್ಮ ಓಟನ್ನು
ರಾಜಕೀಯ ಗೊತ್ತೇ ಇಲ್ಲ ನಮಗಿನ್ನೂ
ಹಳೇ ಮಂತ್ರಿಗಳಿಗೆಲ್ಲಾ ಸೀಟಿನ ಸವಾಲು
ಕೊನೆಯಲ್ಲಿ ಗೆದ್ದೊರ್ ಹೆಸರಲ್ಲಿ ಧಮಾಲು
ಎಲ್ಲೇ ಗೆದ್ರೂನು ಅವರ್ ಹೇಗೆ ಗೆದ್ರೂನು
ಪೆಟ್ರೋಲ್ ರೇಟನ್ನು ಕಡಿಮೆ ಮಾಡ್ಲಿ ಅವರಿನ್ನೂ
ರಾಜಕೀಯ ಮಾಡೋರ ಜೀವನ ಬಲು ಸಲೀಸು
ಯಾರಿಗ್ ಒತ್ತೋಣ ನಮ್ಮ ಓಟನ್ನು
ರಾಜಕೀಯ ಗೊತ್ತೇ ಇಲ್ಲ ನಮಗಿನ್ನೂ


ತುಂಬಾ ಸುಲಭ ಅಂತಾ ತಿಳ್ಕೊಂಡಿದ್ದೆ ರಾಜಕೀಯ , ಶಾಲೆ ಓದೋವಾಗ
ಸಕಾರ ಅರ್ಥ ಸಿನಿಮಾದಲ್ಲಿ ನೋಡಿ ಕಲ್ತಿದ್ದೆ ಹೆಸರು ಎಸ್.ಪಿ ಸಾಂಗ್ಲಿಯಾನ
ಸ್ವಲ್ಪ ದಿನ ಆದ ಮೇಲೆ ಆ ದೇವರು ಕರ್ಕೊಂಡ್ ಬಿಟ್ಟ ನಮ್ ಕರಾಟೆ ಕಿಂಗನ್ನ
ಜನ ಮೆಚ್ಚೋ ನಾಯಕರೆಲ್ಲಾ ಒಬ್ಬೊಬ್ಬರಾಗೆ ಈ ಲೋಕದಿಂದ ಹೋಗೆ ಬಿಟ್ರಲ್ಲ
ಸಾಂಗ್ಲಿಯಾನ ಹೆಸರಲ್ಲಿ ಇನ್ನು ಜೀವಂತ ಎಲ್ಲರ ಮನದಲ್ಲಿ ನಮ್ ಶಂಕರಣ್ಣ
ಒಂದು ಮುತ್ತಿನ ಕಥೆಯು ಮಿಂಚಿನ ಓಟದ ಜೊತೆ ಜೊತೆಯಲಿ ಆರದ ಗಾಯ
ಅಯ್ಯೋ ಸ್ವಾಮೀ ಈ ರಾಜಕೀಯ ತುಂಬಾ ಗೋಳು
ಒಳ್ಳೆಯೋರ್ಗೆ ಇಲ್ಲಿಲ್ಲಾ ಜಾಗ ನೆಮ್ಮದಿಯಾಗಿ ಬದುಕಲು


ನಾನು ಕಲಿತೆ ರಾಜಕೀಯ .. ಅದು ಮದುವೆಗಾಗಿ ಹುಡುಗಿ ಆಯ್ಕೆ ಮಾಡೋ ಸಮಯ
ಸರ್ಕಾರಿ ಕೆಲಸ ಇದ್ರೆ ಕೊಡ್ತಾರೆ ಹೆಣ್ಣನ್ನು .. ವ್ಯಾಪಾರ ಮಾಡೋ ಬ್ರಹ್ಮಚಾರಿ ನಾವಿನ್ನೂ
ದಿನೇ ದಿನೇ ಕಳೆಯೋದ್ ಕೂಡೋದ್ ಲೆಕ್ಕ ಹಾಕೋದೆ ನಮ್ ವ್ಯಾಪಾರ
ರೇಟ್ ಎಲ್ಲಾ ರಾಕೆಟ್ ಹಾಗೆ ಹಾರಿ .. ವ್ಯಾಪಾರ ಈಗ ಬಲು ಖಾರ
ಖಾಲಿ ಕೂತಾಗ ಏನಾದ್ರೂ ಬರಿಯೋದೆ ನಮ್ ಕಾರ್ಯ
ಯಾರ್ಯಾರ್ ಓದ್ತಾರೋ ಗೊತ್ತಿಲ್ಲಾ ಆದ್ರೂ ಬರಿಯೋದ್ ಬಿಡೋಲ್ಲ
ಓದೋವಾಗ್ಲು ಮಾಡ್ತಾರೆ ರಾಜಕೀಯ ಅದುವೇ ಪ್ರಾಬ್ಲಮ್ಮು
ಏನೇ ಬರೆದರೂ ಮತ್ತೇನೋ ಹೇಳ್ತಾರೆ ಹೆಂಗ್ ಹೆಂಗೋ


ಹೇಳೋ ಮಾತನ್ನೆಲ್ಲಾ ಪೂರ್ತಿ ನಡೆಸೋಲ್ಲಾ.. ಮಾಡೋ ಭಾಷಣ ಬರಿ ಓಳು
ಕೆಲಸಾ ಮಾಡೋ ಮಂತ್ರಿ ಕಾಲೆಳೆದು ಕೆಳಗೆ ಬೀಳಿಸ್ತಾರೆ ಹೆಸರು ಬೈ ಎಲೆಕ್ಷನ್ನು
ಓಟು ಹಾಕೋ ಮೊದಲು ರೋಡಿನಲ್ಲಿ ನಡಿತಾರೆ ಬರೀ ಕಾಲಲ್ಲಿ
ಸೀಟು ಗೆದ್ದ ಮೇಲೆ ಕೆಳಗಿಳಿಯೋದಿಲ್ಲಾ ಕೂತಿರ್ತಾರೆ ಕಾರಲ್ಲಿ
ಆಶ್ವಾಸನೆ ಕೊಡೋದೆಲ್ಲಾ ನಿಜ ಅಲ್ಲಾ .. ಚರಂಡಿ ವಾಸನೆ ಹೋಗೋದಿಲ್ಲ
ಕೊಳಚೆ ರಸ್ತೆಯಲ್ಲಿ ಓಡಾಡ್ಲಿ ಅಂತಾ ಕೀಳ್ತಾರೆ ಕರೆಂಟು ಯಾವಾಗ್ಲೂ


ಯಾರಾದ್ರು ಹೆಲ್ಪ್ ಮಾಡ್ರೀ.. ಯಾರಿಗೊತ್ತೋಣ ಓಟನ್ನು
ರಾಜಕೀಯ ಗೊತ್ತೇ ಇಲ್ಲಾ.. ಯಾರನ್ ಗೆಲ್ಸೋದು ನಾವಿನ್ನು .. ????????


|| ಪ್ರಶಾಂತ್ ಖಟಾವಕರ್ ||

Friday 27 July 2012

ಬೆಂಕಿ ಕಡ್ಡಿಯ ಬದುಕಿದು .. :)

ಬೆಂಕಿ ಕಡ್ಡಿಯ ಬದುಕಿದು
*********************************
ಒಂದು ಕಿಡಿ ದ್ವೇಷ ಹರಡಿ
ಈ ಪ್ರೀತಿಯ ಹೃದಯ ನಾಶ
ಬೆಂಕಿ ಕಡ್ಡಿಯ ಬದುಕಿದು
ಕಡ್ಡಿ ಉರಿಯದೆ ಬೆಳಕು ಇಲ್ಲ

ಕಡ್ಡಿ ಉರಿದ ಮೇಲೆ
ಉಳಿಯುವುದೆಲ್ಲ ಬೂದಿ
ಡಬ್ಬಿಯಿಂದ ಇನ್ನೊಂದು
ಕಡ್ಡಿ ಹೊರಬರುವುದು ಬೆಳಗಲು

ಈ ಜಗದ ನಿಯಮ
ಹುಟ್ಟು ಸಾವು ಬೆಂಕಿ
ಕಡ್ಡಿಯ ಜೀವನದಂತೆ
ಡಬ್ಬಿಯ ಒಳಗೆ ಕತ್ತಲು
ಹೊರಗೆ ಬಂದರೆ ಬೆಳಕು
ಉರಿದು ಸಾಯುವ ಅಳುಕು
ಆದರೂ ಬೆಳಕು ಬೇಕು
ತೋರಿಸಲು ಜಗದ ಕೊಳಕು

ಓ ಮಾನವ 
ಮೊದಲು ನಿನ್ನ ಮನದ
ಕೊಳಕ ತಿಳಿಯಲು , ತೊಳೆಯಲು
ಸ್ನೇಹದ ಕಡ್ಡಿಯ ಗೀರು
ಪ್ರೀತಿಯ ಬೆಳಕನ್ನು ಬೀರು
ನಿನ್ನೆದೆಯು ಹತ್ತಿ ಉರಿದರೂ
       ಶಾಂತಿಯ ಮಂತ್ರವ ಸಾರು .. :)

     || ಪ್ರಶಾಂತ್ ಖಟಾವಕರ್ ||


Saturday 21 July 2012

ಮ್ಯಾಂಗೊ ಮ್ಯಾಂಗೊ .... !!



ಮ್ಯಾಂಗೊ ಮ್ಯಾಂಗೊ
ಮ್ಯಾಂಗೊ ಮ್ಯಾಂಗೊ .... !!

ಅರೆರೆ ಓ ಗೆಳಯ.. ಇದ್ಯಾವ ಸಾಂಗೋ .... !!
ಗೊತ್ತಾಗ್ತಿಲ್ಲಾ.... ಹಾಡೋದ್ ಹೆಂಗೋ .. ?

ಮ್ಯಾಂಗೊ ಮ್ಯಾಂಗೊ ಹಣ್ಣು
ಹೊತ್ತು ತಂದ್ಲು ನೋಡು ಹೆಣ್ಣು

ಹೋ ಹೋ ಬಿತ್ತ ಅವಳ್ ಮೇಲೆ ನಿನ್ನ ಕಣ್ಣು
ಶುರುವಾಯ್ತು ಈಗ ನಮಗಿನ್ನು ಟೆನ್`ಶನ್ನೂ......

ಬೇಡ ಗೆಳಯ.. ಬೇಡ ಗೆಳಯ.. ಆ ಹಣ್ಣಿನ ವಿಷಯ

ಹಸಿದ ಹೊಟ್ಟೆಗೆ ಹಣ್ಣು ಸಿಕ್ರೆ ಸುಮ್ನಿರೋದು ಸರಿಯಾ .. ?

ಇದು ಮ್ಯಾಂಗೊ ಸೀಜನ್ ಕಣೋ
ಹಣ್ಣು ತಿನ್ನೋಕ್ಕೆ ತುಂಬಾ ರುಚಿನೋ......

ಆದ್ರೆ ಹಣ್ಣು ಮಾರೋಳು ಹೆಣ್ಣು ಕಣೋ
ಹೆಣ್ಣಿನ್ ಹತ್ರ ನಿನಗೀಗ ಮಾತು ಬೇಡಾ ಕಣೋ

ಆಯ್ಯೋ ಅವಳಾ ನೆನಪಲ್ಲಿ .. ನಾನ್ಯಾಕೆ ತಿನ್ನೋದ್ ಬಿಡ್ಲಿ ..
ಹೊಟ್ಟೆ ಹಸಿದಿದೆ .. ರುಚಿ ರುಚಿ ಹಣ್ಣು .. ಕಣ್ಣೆದುರಲ್ಲೇ ಇದೇ...

ಹಣ್ಣು ಹಣ್ಣು ಅಂತಾ ನೀ ಮಾತಾಡ್ಸ್`ಬ್ಯಾಡ ಹೆಣ್ಣನ್ನ
ಮಾತು ಮಾತಿನಲ್ಲೇ ನೀ ಪ್ರೀತಿಸ್ತಿಯಾ ಹುಡ್ಗೀನಾ.....

ನಾನೇನು ಮಾಡ್ಲಿ ಗೆಳಯ .. ಈ ವಯಸ್ಸೇ ಹಿಂಗಯ್ಯಾ ..
ಬೇಡ ಬೇಡ ಅಂದ್ರು .. ನನ್ ಮಾತ್ ಕೇಳೋಲ್ಲ ಈ ಹೃದಯಾ...

ಓ ಹೋ ಆಯ್ತಲ್ಲ ನಿನ್ ಹಾರ್ಟು ಮ್ಯಾಂಗೊ
ಶುರುವಾಯ್ತು ಮನಸ್ಸಲ್ಲಿ ಹೆಂಗ್`ಹೆಂಗೋ
ಹಣ್ಣು ನೋಡ್ತಾ ನೋಡ್ತಾ ಹುಟ್ಟಿತು ಈ ಸಾಂಗೋ ......

ಮ್ಯಾಂಗೊ ಮ್ಯಾಂಗೊ.. 
ಮ್ಯಾಂಗೊ ಹೆಸರಲ್ಲಿ ...
ಹಣ್ಣನು ನೋಡಿ .. ನೋಟದ ಮೋಡಿ .. ಹೃದಯವು ಹಾಡಿ ..
ಕಣ್ಣಿನ ಜೋಡಿ .. ಮನಸನು ಕಾಡಿ .. ಏರಿತು ಪ್ರೀತಿಯ ಗಾಡಿ ...

ಮ್ಯಾಂಗೊ ಮ್ಯಾಂಗೊ ಮ್ಯಾಂಗೊ ಮ್ಯಾಂಗೊ
ಈ ಸಾಂಗೆ ಹಿಂಗೋ .. ಗೊತ್ತಾಗ್ತಿಲ್ಲಾ.... ಹಾಡೋದ್ ಹೆಂಗೋ .. ?

|| ಪ್ರಶಾಂತ್ ಖಟಾವಕರ್ ||

Sunday 15 July 2012

ಕಿರುನಗೆಯ ನನ್ಮೇಲೆ ಹಾಕೆ .. :) :)


ಕಿರುನಗೆಯ ನನ್ಮೇಲೆ ಹಾಕೆ .. :) :)
***********************************

       ಏಕೆ ನೀನೇಕೆ ಹೀಗೇಕೆ .. ?
ನನ್ನ ಮೇಲೆ ಮುನಿಸೇಕೆ
ತುಟಿಯಂಚಿಂದ ಬಿಸಾಕೆ
ಕಿರುನಗೆಯ ನನ್ಮೇಲೆ ಹಾಕೆ

ಹಸಿರು ಗಾಜಿನ ಬಳೆಗಳು ಸಾಕೆ
ಬೆಳ್ಳಿ ಬಂಗಾರದ ಒಡವೆಗಳು ಬೇಕೇ
ನೀನೆನ್ನ ಬಳಿ ಇರಲು ನನಗದು ಸಾಕೆ
ನೀನೊಮ್ಮೆ ನಗಲು ನಿನಗೇನು ಬೇಕೇ

ಅಕ್ಕಪಕ್ಕದವರ ಮನೆಯ ಚಿಂತೆ ಏಕೆ
ಅವರೇನಾದರೂ ತರಲಿ ಬಿಡು ನಿನಗೇಕೆ
ನಾಲ್ಕು ಗಾಲಿಯೋ , ಗೋಲಿಯೋ ಅದೇಕೆ
ನಾನಿಲ್ಲವೇ ನಿನಗೇನು ಬೇಕು ಕೊಡಿಸೋಕೆ

ನನ್ನ ಮೇಲೆ ಮುನಿಸೇಕೆ
       ಏಕೆ ನೀನೇಕೆ ಹೀಗೇಕೆ .. ?

|| ಪ್ರಶಾಂತ್ ಖಟಾವಕರ್ ||



Friday 13 July 2012

ಇದು ಹಾರ್ಟಿಂದ ಹಾರಿ ಬಂತು ..... ..... (ನಿನ್ ಪ್ರೀತಿ ಮಾಡಿದ ತಪ್ಪಿಗೆ ನಾ ಹೇಗಾದೆ ನೋಡು..)


ಎ ಎ ಎ ಕೇಳೆ ನನ್ ಮಾತು
ಇದು ಹಾರ್ಟಿಂದ ಹಾರಿ ಬಂತು
ನಾನಂದ್ರೆ ನಿನಗಿಷ್ಟ ಅಂತ ಗೊತ್ತು
ಸುಮ್ಸುಮ್ಮನೆ ಯಾಕ್ ಓಡ್ತಿ ನನ್ ಬಿಟ್ಟು

ಶಾಂತಿ ಶಾಂತಿ ಅಂತ ಹೇಳ್ದ ಆ ಬುದ್ದ
ನೀನ್ ಶಾಂತಿ ಅಂತ ಹಿಂದೆ ಬಿದ್ದ ಈ ಪೆದ್ದ
ಕೊಟ್ಟರೆ 1 ಇನ್ನೊಂದ್ ತೋರ್ಸಂದ್ರು ಗಾಂಧೀ ತಾತ
ಅದಕ್ಕೆ ನನ್ನೆರಡು ಕೆನ್ನೆಗಳು ನಿನಗಾಗಿ ಇಂದು ಸ್ವಂತ

ಕೈಯಲ್ಲಾದ್ರು ಕೊಡು , ತುಟಿಯಲ್ಲಾದ್ರು ಇಡು
ಒಂದ್ ಸಾರಿ ನೀ ನನ್ನ ಮನಸಾರೆ ಮುಟ್ಟಿ ಬಿಡು
ಹಳೆ ದೇವದಾಸ್ ನೆನಪಲ್ಲಿ ಹೇಳ್ತೀನಿ ಹೊಸ ಹಾಡು
       ನಿನ್ ಪ್ರೀತಿ ಮಾಡಿದ ತಪ್ಪಿಗೆ ನಾ ಹೇಗಾದೆ ನೋಡು .. :)


|| ಪ್ರಶಾಂತ್ ಖಟಾವಕರ್ ||


ಯೋಚನೆ ಮಾಡು ಓ ಮನುಜ


ಯೋಚನೆ ಮಾಡು ಓ ಮನುಜ 
***********************************

ರಾಜಕೀಯ.... ಎಲ್ಲಾ ಸುಳ್ಳು
ರಾಮರಾಜ್ಯ ಕನಸದು ಕೇಳು
ಓಟಿಗೊಂದು ನೋಟು ಆ ದಿನಗಳು
ಓಟಿಗಾಗಿ ಏನೇನೋ ಈ ದಿನಗಳು

ನೀತಿ ನಿಯಮ ಗಾಳಿಗೆ ತೂರಿ
ಬಡವರೆದೆ ಮೇಲೆ ಕಾಲು ಊರಿ
ಕಿತ್ತಾಡುತ ಕೂತರು ಕುರ್ಚಿಯ ಏರಿ
ಎಣಿಸುತ ಜನ ಜನ , ಜಾತಿಯ ಚೂರಿ

ಹಗಲೆಲ್ಲಾ ನನ್ನ ಗುಂಪು , ನಿನ್ನ ಗುಂಪು
ಇರುಳಲ್ಲಿ ಗುಂಪುಗಳೆಲ್ಲಾ ಒಂದೇ ಗುಂಪು
ಏರಿಸಿ ಬೆಲೆಯ ನಾಲ್ಕು ಪಾಲು , ಅದು ತಪ್ಪು
ಇಳಿಸಿ ಎರಡು ಪಾಲು , ಅಯ್ಯೋ ಜನ ಬೆಪ್ಪು

ಯೋಚನೆ ಮಾಡು ಓ ಮನುಜ
ಯಾವುದು ಸರಿ ಯಾವುದು ತಪ್ಪು .. !!

|| ಪ್ರಶಾಂತ್ ಖಟಾವಕರ್ ||

Wednesday 11 July 2012

ಮಾತು ನಿನ್ನ ಮಾತು

ಮಾತು ನಿನ್ನ ಮಾತು
******************************************

ಮಾತು ನಿನ್ನ ಮಾತು
ಹೃದಯದ ಕದ ತಟ್ಟಿತು
ಆ ಸದ್ದಿಗೆ ಮನ ಹಾಡಿತು
ಪ್ರೀತಿಯಿಂದ ನಿನ್ನ ಕೂಗಿತು

ಸಂಗಾತಿ ನಿನ್ನ ಪ್ರೀತಿ
ಸವಿ ಘಳಿಗೆಯ ಸಂಗತಿ
ಸುಮ್ಮನೇಕೆ ನನ್ನ ಕಾಡುತಿ
ಎದೆ ತಟ್ಟಿ ನೀನೇಕೆ ಓಡುತಿ

ಬಾರೆ ಚೆಲುವೆ ನೀನೆನ್ನ ಬಳಿಗೆ
ನಿನ್ನ ಗೆಜ್ಜೆ ಸದ್ದುಗಳ ಆ ಘಳಿಗೆ
ಚಿಗುರುವುದು ಪ್ರೀತಿಯ ಸಂಪಿಗೆ
ಗಮಗಮ ಪರಿಮಳ ಮನದೊಳಗೆ

ಹತ್ತಿರ ಬಂದು ನೀನೆನ್ನ ಬಳಿಯಲ್ಲಿ
ತೋಳಿಂದ ಬಳಸಿ ನಿನ್ನಪ್ಪುಗೆಯಲ್ಲಿ
ಮುತ್ತೊಂದ ಕೊಡು ನಡು ರಾತ್ರಿಯಲ್ಲಿ
           ಹತ್ತಿಕೊಳ್ಳಲಿ ಪ್ರೀತಿಯ ಬೆಳಕು ಮನದಲ್ಲಿ .. :) :)

|| ಪ್ರಶಾಂತ್ ಖಟಾವಕರ್ ||
ಆಜಾದ್ ಸರ್ ಅವರಿಂದ ಕೊನೆಯ ಸಾಲಿನಲ್ಲಿ ಒಂದು ಚೆಂದದ ಬದಲಾವಣೆ ...  >>
ಹತ್ತಿಕೊಳ್ಳಲಿ ಒಣಗಿದೆದೆ ಪ್ರೀತಿ ಹೊತ್ತಿನಲ್ಲಿ

Sunday 8 July 2012

ನಿನ್ನದೇ ನೆನಪಿನಲ್ಲಿ ... !! [ dinosaur ]



ನಿನ್ನದೇ ನೆನಪಿನಲ್ಲಿ ... !!
*************************

ನೀ ಓಡು ಮುಂದೆ ಮುಂದೆ
ನಾ ಬರುವೆ ಹಿಂದೆ ಹಿಂದೆ

ಸಾವಿರ ಸಾವಿರ ವರುಷ
ಹಸಿದಿದ್ದ ನನಗಿಂದು ಹರುಷ
ತಿನ್ನಲು ಸಾಕು ಒಂದೇ ನಿಮಿಷ
ತಪ್ಪಿಸಿಕೊ ನಿನ್ನಲ್ಲಿದ್ದರೆ ಪೌರುಷ

ದ್ವೇಷವಿಲ್ಲ ನನಗೆ ನಿನ್ನ ಮೇಲೆ
ತಿನ್ನೋದಿಲ್ಲ ನಿನ್ನನ್ನು ಈಗಲೆ
ನೀ ಓಡು ಓಡು ನಿಲ್ಲಬೇಡ ಇಲ್ಲೇ
ಓಡಿಸಿ ಓಡಿಸಿ ತಿನ್ನಲು ನಾ ಬಲ್ಲೆ

ನೀನೇಕೆ ಬಂದೆ ನನ್ನೂರಿನೊಳು
ನೀ ಬಂದ ಕಾರಣವೇನು ಹೇಳು
ಜೀವ ಭಯದಲ್ಲಿ ನಿಲ್ಲದ ನಿನ್ನ ಅಳು
ತಿನ್ನದೇ ಬಿಟ್ಟರೆ ನನ್ನ ಜೀವನ ಹಾಳು

ನೀ ಓಡು ಮುಂದೆ ಮುಂದೆ
ನಾ ಬರುವೆ ಹಿಂದೆ ಹಿಂದೆ

ಆಆಔರ್ರ್ ಒರಔರ್ರ್ …. ಆಆಔರ್ರ್ ಒರಔರ್ರ್ …. 

|| ಪ್ರಶಾಂತ್ ಖಟಾವಕರ್ ||

Wednesday 4 July 2012

ಎಚ್ಚರಿಕೆ .. !!!!!



ಎಚ್ಚರಿಕೆ .. !!!!! 
**********************

ಹತ್ತು ಜನರ ಕಿತ್ತು ತಿಂದ
ನೀನೇನಾ ಮಹಾಪ್ರಭು !!
ಮಕ್ಕಳೂಟವನ್ನು ಬಿಡದೇ
ಬಾಚಿಕೊಂಡ ಬಕಾಸುರ !!

ಹೆಸರು ಮಾಡಿ , ಕೆಸರಲ್ಲಾಡಿ
ಮೊಸರ ತಿಂದು ಮೆರೆಯುವ
ನರಿ ಬುದ್ದಿಯ ಅಸುರಾಧಿಪತಿ
ತೋಳಗಳ ಗುಂಪಿನೊಡಯ !!

ರಾಜವೈಭೋಗದಿ ಸುಖವನನುಭವಿಸಿ
ಸಿಕ್ಕ ಸಿಕ್ಕಷ್ಟು ದೋಚಿಕೊಳ್ಳುವ ಕಳ್ಳ !!
ಮಾತು ಮಾತಿನಲ್ಲೇ ಮರಳುಮಾಡಿ
ಮೋಸ ಮಾಡುವ ಚೋರರ ನಾಯಕ !!

ಇನ್ನದೆಷ್ಟು ದಿನಗಳು ಅಬ್ಬರಿಸುವೆ
ಮಹಾರಾಜನೆಂದು ಮೆರೆದಾಡುವೆ
ನಾನಿಳಿಯಲು ರಣರಂಗದೊಳು
ನಿನಗುಳಿಗಾಲವಿಲ್ಲ.... ಎಚ್ಚರಿಕೆ .. !!!!!

|| ಪ್ರಶಾಂತ್ ಖಟಾವಕರ್ ||

Tuesday 3 July 2012

ನ್ಯಾಯ ಎಲ್ಲಿದೆ .. ನ್ಯಾಯ ಎಲ್ಲಿದೆ .. ?????


ನ್ಯಾಯ ಎಲ್ಲಿದೆ .. ನ್ಯಾಯ ಎಲ್ಲಿದೆ .. ????? 
****************************************

ಪ್ರೀತಿಯ ಮಾಡದೆ
ನಾ ಪ್ರೇಮಿಯಾದೆ
ಕವಿತೆಯ ಬರೆಯದೆ
ನಾ ಕವಿಯಾದೆ ..!!

ಕನಸುಗಳು ಇಲ್ಲದೆ
ನಾ ಕನಸುಗಾರನಾದೆ
ಕಲ್ಪನೆಯ ಕಾಣದೆ
ನಾ ಕಥೆಯೊಂದ ಬರೆದೆ

ರಾಜಕೀಯ ಅರಿಯದೆ
ನಾ ರಾಜಕಾರಣಿಯಾದೆ
ನನ್ನ ಮೌನವೇ ಶತ್ರುವಾಗಿದೆ
ನಾನ್ಯಾರಿಗೂ ಬೇಡವಾಗಿದೆ
ನ್ಯಾಯ ಎಲ್ಲಿದೆ .. ನ್ಯಾಯ ಎಲ್ಲಿದೆ .. ????? 

|| ಪ್ರಶಾಂತ್ ಖಟಾವಕರ್ ||

ಖರ್ಚು ಕಡಿಮೆ ................>> :) :)


ಅರಿತವರ್ಯಾರು
ನಿನ್ನ ಲೀಲೆಗಳ
ವಿಧವಿಧದ ಬೇಡಿಕೆಗಳ
ಓ ಎನ್ನ ಗೆಳತಿಯೇ
ನಿನ್ನ ಪ್ರೀತಿಸುವುದು
         ಬಲು ದುಬಾರಿ ಕಣೇ .. :) :)

ಅರಿಯುವೆ ನೀ ಅದೆಂದು
ಜೀವನ ಲೆಕ್ಕಾಚಾರಗಳ
ತಿಳಿಯುವೆ ಬೇಕು ಬೇಡಗಳ
ಓ ಎನ್ನ ಪ್ರೇಯಸಿಯೇ
ನಿನ್ನ ಜೊತೆಯಲ್ಲಿದ್ದರೆ
          ನಾ ಮೌನಿ , ನೀ ಜಾಣೇ .. :) :)

ಇದುವೇ ಏನೋ ಪ್ರೀತಿ ಎಂದರೆ
ಕೊಟ್ಟರೂ ನೀನೆಷ್ಟೇ ತೊಂದರೆ
ನಾ ನಿನ್ನ ಬಿಡಲಾರೆ
ನಾ ನಿನ್ನ ಮರೆಯಲಾರೆ
ಬದುಕಿನ ಬೆಳ್ಳಿ ಪರದೆಯ ಮೇಲೆ
ನೀನೇ ನನ್ನ ಮನಮೆಚ್ಚಿದ ತಾರೆ
ಎದೆಯಂಗಳದಿ ನರ್ತಿಸುವ ಅಪ್ಸರೆ
ಸ್ವಲ್ಪ ಖರ್ಚು ಕಡಿಮೆ ಮಾಡಿ
                            ಜೀವನ ನೌಕೆಯ ನಡೆಸು ಬಾರೇ................>> :) :)

ಪಿಪಿಕೆ.ಡಿವಿಜಿ

|| ಪ್ರಶಾಂತ್ ಖಟಾವಕರ್ ||

Sunday 1 July 2012

ಹಾಡಲು ಬಾರದೆ.. ನಾ ಹಾಡಿದೆ.. :)


ಹಾಡಲು ಬಾರದೆ.. ನಾ ಹಾಡಿದೆ.. :)
++++++++++++++++++++++++++++++

ಹಾಡಲು ಬಾರದೆ
ನಾ ಹಾಡಿದೆ
ಹಾಡಲು ಬಾರದೆ
ನಾ ಹಾಡಿದೆ
ನಿನ್ನ ನಗುವ ನೋಡಲೆಂದು
ತುಟಿಯಂಚುಗಳು ಮಿಂಚಲೆಂದು
ಕುಣಿಯಲು ಬಾದರೆ
ನಾ ಕುಣಿದಾಡಿದೆ
ನಿನಗಾಗಿ
ನಾ ಕುಣಿದಾಡಿದೆ

ಮೆಲ್ಲಮೆಲ್ಲನೇ ನೀ ನಗಲು
ಹೊಳೆಯುವುದು ಆ ಮುಗಿಲು
ಚಿಲಿಪಿಲಿ ಸದ್ದಿನ ಹಕ್ಕಿಗಳ ಸಾಲು
ಅದುವೇ ಸಂಗೀತ ನಾ ಹಾಡಲು

ತಂಪು ತಂಪು ತಂಗಾಳಿ ಮೈ ಸೋಕಲು
ನಡುಗಿ ನಡುಗಿ ನಾಲಿಗೆಯು ನಲಿಯಲು
ನಾನಾಡುವ ನುಡಿಗಳಲಿ ಏರಿಳಿತವಿರಲು
ಅದುವೇ ಕಾರಣ ಮಾತೆಲ್ಲ ಹಾಡಾಗಲು

ಸಂಜೆ ಸೂರ್ಯ ಸುಮ್ಮನೆ ಸರಿಯಲು
ಪೂರ್ಣಚಂದ್ರ ಬಂದು ಬೆಳಕ ಚೆಲ್ಲಲು
ಚೆಲುವೆ ನಿನ್ನ ಬಿಂಬ ಹೃದಯದಿ ಮೂಡಲು
ಈ ಹೃದಯವು ಹಾಡುತಿದೆ ನೀ ನಗಲು

ಹಾಡಲು ಬಾರದೆ
ನಾ ಹಾಡಿದೆ
ಹಾಡಲು ಬಾರದೆ
ನಾ ಹಾಡಿದೆ
ನಿನ್ನ ನಗುವ ನೋಡಲೆಂದು
ತುಟಿಯಂಚುಗಳು ಮಿಂಚಲೆಂದು
ಕುಣಿಯಲು ಬಾದರೆ
ನಾ ಕುಣಿದಾಡಿದೆ
ನಿನಗಾಗಿ
ನಾ ಕುಣಿದಾಡಿದೆ
ಹಾಡಲು ಬಾರದೆ
ನಾ ಹಾಡಿದೆ
ಹಾಡಲು ಬಾರದೆ
            ನಾ ಹಾಡಿದೆ ....... :)

|| ಪ್ರಶಾಂತ್ ಖಟಾವಕರ್ ||