*****************************
ಬರೆಯಲೊಂದು ಗೀತೆಯ
ಗೆಳತಿಗಿಷ್ಟವಾದ ಕವಿತೆಯ
ಹೃದಯದಾಳದ ಕೋರಿಕೆಯ
ಸೇರಿಸಿ ಸಾಲು ಸಾಲು ಪ್ರೀತಿಯ
ಮೆಚ್ಚಿ ಕೊಟ್ಟಳು ಮುತ್ತೊಂದ
ಬರೆಯಲು ಹೇಳಿ ಮತ್ತೊಂದ
ಆ ಮತ್ತಲಿ ಬಂತು ಮಾತೊಂದು
ಸಿಹಿ ಮುತ್ತು ಬೇಕು ಮತ್ತೊಂದು
ಮುತ್ತಿನ ಮತ್ತಲಿ ಗೀಚಿದೆ ಸಾಲೊಂದು
ಮಾಡಿದೆ ಚಿಂತೆಯ ಮುಂದೇನೆಂದು
ಗೀಚಿದೆ ಗೆರೆಗಳ ಮನದಲ್ಲೇ ನೊಂದು
ಅವಳದೇ ಚಿತ್ರವ ಬರೆದೆ ನಾನಂದು
ಚಿತ್ರವ ಕಂಡು ಖುಷಿಯಾಗಿ ಕುಣಿದಳು
ಹತ್ತಿರ ಕರೆದು ಮುತ್ತೆರಡು ಕೊಟ್ಟಳು
ಮತ್ತೊಂದು ಚಿತ್ರ ಬರೆಯಲು ಹೇಳಿದಳು
ನಾಲ್ಕು ಮುತ್ತಿನ ಆಸೆಯ ಹುಟ್ಟಿಸಿದಳು
ನಾಲ್ಕು ಮುತ್ತುಗಳ ಕನಸು ಕಾಣುತ
ನಾ ಕುಂಚ ಹಿಡಿದೆ ಅವಳ ನೋಡುತ
ನಾನೇನ ಬರೆಯಲೆಂದು ಚಿಂತಿಸುತ
ನಾ ಗುನುಗಿದೆ ಹಳೆ ಕವಿತೆ ನೆನೆಯುತ
ಕೇಳಿ ನುಡಿದಳು ಕವಿತೆಯ ಹಾಡೀಗ
ಹಾಡಿದೆ ನಾನಾಗ ಅಲ್ಲಿ ಹೊಸರಾಗ
ಮೆಚ್ಚಿ ನಾಲ್ಕು ಮುತ್ತಿಟ್ಟು ಬೇಗ ಬೇಗ
ಹಾಡಲು ಹೇಳಿದಳು ಮತ್ತೊಂದ ಆಗ
ಕವಿತೆಗೊಂದು , ಚಿತ್ರಕ್ಕೆರಡು ಮುತ್ತು
ಹಾಡಿಗಾಗಿ ಕೊಟ್ಟದ್ದು ನಾಲ್ಕು ಮುತ್ತು
ಲೆಕ್ಕ ಹಾಕಿದಾಗಲ್ಲಿ ಏಳು ಸಿಹಿ ಮುತ್ತು
ಮತ್ತೊಂದ ಹಾಡಲು ಎಂಟು ಮುತ್ತು .. :)
|| ಪ್ರಶಾಂತ್ ಖಟಾವಕರ್ ||