Saturday, 17 December 2011

ಪ್ರೀತಿ ಮತ್ತು ಗೌರವ..





ಪ್ರೀತಿ ಮತ್ತು ಗೌರವ..
**********


ನಾನು ನಾನೇ ಎಂದರೆ
ನೀವು ಒಪ್ಪುವುದಿಲ್ಲ
ನಾನು ನಾನಲ್ಲ ಎಂದು 
ನೀವು ಹೇಳಿದರೂ 
ನಾನು ಒಪ್ಪುವುದಿಲ್ಲ

ನಾನು ನಾನೇ ಎಂದರೆ
ನೀವು ಹೇಳುವಿರಿ
ನಾನು ಎಂಬ ಅಹಮ್ಮ್ 
ನಿನಗೆ ಬೇಡವೆಂದು
ಬೇಗನೆ ಅದನ್ನು ಬಿಡು ಎಂದು

ನಾನು ನಾನೇ ಎನ್ನುವ ಅಹಮ್ಮ್ ಬಿಟ್ಟರು
ನೀವು ಅದನ್ನು ನಂಬುವುದಿಲ್ಲ
ನೀವು ನಂಬಿದರೂ ಸಹ 
ನನ್ನಲ್ಲಿ ಅದು ಬಿಟ್ಟುಹೋದ ಭಾವನೆ ಬರುವುದಿಲ್ಲ
ಬಂದರೂ ಮತ್ತೆ ನೀವು ಅದನ್ನು ನಂಬುವುದಿಲ್ಲ

ನಾನು ನಾನೇ ಎನ್ನುವುದನ್ನು ಬಿಟ್ಟು
ನಾವು ಎನ್ನುವ ಅಭ್ಯಾಸ ನಮ್ಮದು
ನಮ್ಮ ಈ ಮಾತಿಗೆ ಕಾರಣ ನಾವೇ....
ನಮ್ಮೊಳಗಿನ ನಮ್ಮ ಮುದ್ದು ಮನಸ್ಸು....

ನಮಗೆ ನಾವೇ ಕೊಡುವ ಬಹುವಚನದ ಕಾರಣ
ನಮ್ಮಲ್ಲಿ ನೆಲೆಸಿರುವರು ಹಲವಾರು ಜನ..
ಹುಟ್ಟಿನಲ್ಲಿ ಮಗುವಾಗಿ , 
ಅಪ್ಪ ಅಮ್ಮನಿಗೆ ಮಗನಾಗಿ ,
ಅಕ್ಕ ತಂಗಿಯರಿಗೆ.. ಅಣ್ಣ ತಮ್ಮಂದಿರಿಗೆ..
ಅಣ್ಣ ತಮ್ಮನಾಗಿ ,
ಅತ್ತೆ ಮಾವನಿಗೆ ಅಳಿಯನಾಗಿ ,
ಮೈದುನನಾಗಿ , ಸ್ನೇಹಿತನಾಗಿ ,
ಪ್ರೇಮಿಯಾಗಿ , ಕವಿಯಾಗಿ ,
ಕಥೆಗಾರನಾಗಿ , ದೇಶದ ಪ್ರಜೆಯಾಗಿ ,
ದೇಶಪ್ರೇಮಿಯಾಗಿ , ಚಿಂತಕನಾಗಿ ,
ಗಂಡನಾಗಿ , ಸಂಸಾರಿಯಾಗಿ ,
ಹಲವಾರು ಬಗೆ ಬಗೆಯ ಅವತಾರಗಳ ರೂಪವು

ಅವೆಲ್ಲದರ ಸಮ್ಮಿಲನವು 
ನನ್ನಲ್ಲೇ ಎಂದು ಹೇಳಿದರೆ ತಪ್ಪು
ಅವು ನಿಮ್ಮಲ್ಲೂ ಕೂಡ ಇರುತ್ತವೆ..
ಅದಕ್ಕಾಗಿ ನಾನು ನಾನಲ್ಲ ಅದು ನಾವು ..
ನಾವು ನಮ್ಮನ್ನು ಹೇಳಿಕೊಳ್ಳುವಾಗ
ನೆಪ ಮಾತ್ರಕ್ಕೆ ನಾವು
ಆದರೆ ಒಬ್ಬರೇ ಅದು ನಾನೇ..

ನಾನು ನಾನೇ ಎನ್ನಲು
ಹೆಣ್ಣು ಕಾರಣ 
ನನ್ನ ಹೆಂಡತಿಯ 
ಪರಿಚಯ ಮಾಡಿಸಲು
ನಮ್ಮ ಹೆಂಡತಿ ಎಂದು ಹೇಗೆ ಹೇಳುವುದು..!!
ನಮ್ಮ ಹೆಂಡತಿಯವರು ಇವರು..!!
ಎಂದು ಗೌರವ ನೀಡಲು 
ಅಲ್ಲಿಲ್ಲ ಪ್ರೀತಿಯು
ಪ್ರೀತಿ ಇಲ್ಲದ ಸಂಸಾರದ ಗತಿಯೇನು .... ?


ಈ ಕಾರಣಕ್ಕೆ ಕೆಲವೊಮ್ಮೆ
ನಾನು ನಾನೇ ಆಗಬೇಕು..
ನನ್ನ ಹೆಂಡತಿ ಎನ್ನುವ ಪ್ರೀತಿಯು ಇರಬೇಕು..
ನಾನು ನೀನು ಪ್ರೀತಿಯ ಪದಗಳು ..
ನಾವು ನೀವು ಗೌರವ ಸೂಚಕಗಳು..

ನಾನು ನೀನೆಂದರೆ ಪ್ರೀತಿಯ ಸೆಳೆತ
ನನ್ನ ಮನದಲ್ಲಿ ಸದಾ ನೀನು ಇರುತ
ನಾವು ನೀವು ಎನ್ನಲು ಕ್ಷಣ ಮಾತ್ರದ ಗೌರವ
ನಮ್ಮ ಸಂಸ್ಕೃತಿಯ ಒಂದು ವಿಶೇಷ ಪ್ರಭಾವ
ಪ್ರೀತಿ ಸ್ನೇಹ ಇಲ್ಲವಾದಲ್ಲಿ .. 
ನಾ ಹೇಗೆ ಆಗಲಿ ನಿಮ್ಮವ.. :)

ನಾವು ನಾವೇ.. ನೀವು ನೀವೇ..
ನಾವು + ನೀವು = ನಾವೇ.. ಅಲ್ಲವೇ.. ?

|| ಪ್ರಶಾಂತ್ ಖಟಾವಕರ್ ||

3 comments:

  1. ಪ್ರೀತಿ ಮತ್ತು ಗೌರವ ಭಾವನೆಯು ವ್ಯಕ್ತಿಯು ತನ್ನ ಅಸ್ತಿತ್ವ ಮತ್ತು ಇರುವಿಕೆಯನ್ನು ತೋರಿಸುವ ಇಚ್ಛಾಶಕ್ತಿಯ ಸಂಕೇತ.ಬದುಕಿನ ಹಾದಿಯು ನಮ್ಮೆಲ್ಲರ ನಡವಳಿಯನ್ನು ದಾಖಲಿಸುವುದು.ಅಂತ ಜೀವನ ನಮ್ಮದಾಗಬೇಕಾದರೆ ಪರಸ್ಪರರೊಂದಿಗೆ ನಾವ್ಹೇಗೆ ಬೆರೆತುಕೊಳ್ಳುತ್ತೇವೆ,ನೆರೆ ಹೊರೆಯವರೊಂದಿಗಿನ ನಮ್ಮ ನಮ್ಮ ಸಂಬಂಧ ಎಂಥದ್ದು ಎನ್ನುವುದನ್ನು ಅವಲಂಬಿಸುವುದು.'ಪ್ರೀತಿ ಸ್ನೇಹ ಇಲ್ಲವಾದಲ್ಲಿ ,ನಾ ಹೇಗೆ ಆಗಲಿ ನಿಮ್ಮವ' ಎನ್ನುವ ಭಾವ ಸ್ಪುರತೆಯು ವಾಸ್ತವ ನಡೆಯನ್ನು ವಿವರಿಸುವುದು.ನೀ ಹೆಣ್ಣಾಗಿ ಹುಟ್ಟಿ ನನ್ನ ಜನನಕ್ಕೆ ನೀ ಕಾರಣವಾಗಿರದಿದ್ದರೆ ನನಗಾದರೂ ಎಲ್ಲಿಯ ನೆಲೆ? ಈ ಭಾವನೆಯೇ ಅತಿ ಸೊಗಸಿನದು.ಏನೇ ಆದರೂ ನಾನೆಂಬ ಅಹಮ್ಮಿಕೆಯ ಕೋಟೆಯಿಂದ ಹೊರ ಬಂದು ನಾವಾಗುವುದರಲ್ಲಿಯೇ ಬದುಕಲು ಕಲಿಯುವ ನೀತಿಯುತ ಸಂದೇಶ ಕವನದ ಆಶಯದಲ್ಲಿದೆ.ತುಂಬಾ ಚನ್ನಾಗಿದೆ ಕವಿ ಭಾವನೆ ಇಷ್ಟವಾಯಿತು.

    ReplyDelete
  2. @ Banavasi Somashekhar.
    ಸಂಪೂರ್ಣ ಮನಸ್ಪೂರ್ವಕವಾಗಿ ನಿಮ್ಮ ಮಾತುಗಳನ್ನು ಸ್ವಾಗತಿಸುತ್ತಾ... ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಸರ್... :)

    ReplyDelete