ಬೆಟ್ಟದ ಭೂತಗಳು
**************
ಜಳ ಜಳ , ಜುಳು ಜುಳು
ರಭಸದಿ ತುಂಗಭದ್ರೆಯು
ಧುಮುಕುವಳು ದಟ್ಟಡವಿಯ
ಕಲ್ಲು ಕಣಿವೆಗಳ ಪ್ರಪಾತದೊಳು
ಝೇಂಕರಿಸಿ, ಆರ್ಭಟಿಸಿ, ಹಾರಲು
ವೇಗದೊಳು ಅಗ್ನಿಯಂತೆ ಕುದಿಯಲು..
ಅಪ್ರತಿಮ ಮಾನವ ಮೆದುಳ ಮಾಯೆ
ಮೂಡಿತಲ್ಲಿ ಪ್ರಕಾಶಮಾನವಾದ ಛಾಯೆ
ಅಲ್ಲಾಯಿತು ವಿಸ್ಮಯ, ನವಶಕ್ತಿಯ ಜನನ
ಮುಟ್ಟಿದರೆ ಮುನಿಯು, ಖಚಿತ ಮರಣ
ಶಕ್ತಿಯು ಹೆಮ್ಮರವಾಗಿ ಬೆಳೆದು ನಿಂತು
ಇಡೀ ಜಗವನ್ನೇ ತನ್ನ ಪ್ರತಾಪದಿ ಬೆಳಗಿತು
ಉಗಮವಾದವು ವಿದ್ಯುಜ್ಜನಕ ವಸ್ತುಗಳು..
ಜಳ ಜಳ , ಜುಳು ಜುಳು
ರಭಸದಿ ತುಂಗಭದ್ರೆಯು
ಧುಮುಕುವಳು ದಟ್ಟಡವಿಯ
ಕಲ್ಲು ಕಣಿವೆಗಳ ಪ್ರಪಾತದೊಳು..
ಬಂದವಲ್ಲಿಗೆ ಭಯಂಕರ ಬೆಟ್ಟದ ಭೂತಗಳು
ಕಂಡದ್ದೆಲ್ಲ ಕಿತ್ತು ತಿನ್ನಲವು ಕಾಡು ದೆವ್ವಗಳು
ಕಾಗೆ ಬುದ್ದಿಯೂ , ನರಿ ಬುದ್ದಿಯೂ ಸೇರಿಸಿ
ಗುಂಪು ಕಟ್ಟಿ , ಹೊಂಚು ಹಾಕಿ , ಪಾಲುಗಾರಿಕೆ..
ಅಧಿಕಾರದ ಅಮಲಿನೊಳು ಮದವೇರಿದ ಹುಚ್ಚರು
ಮಾತು ಮಾತಿನೊಳಗೂ ಕುತಂತ್ರ ಬುದ್ದಿಯ ದುಷ್ಟರು
ಕೈ ಚಾಚಿ , ಬಾಯಿ ಬಿಟ್ಟು ಮತ್ತಷ್ಟು ಬೇಕೆನ್ನುವ ಭ್ರಷ್ಟರು
ಕೂತು ತಿನ್ನಲು ಹಂಡೆಗಿಂತಲೂ ಅಧಿಕ ಹೊನ್ನು ಇದ್ದರೂ..
ಅತ್ತ ಕಡೆಯು ಅಬ್ಬಬ್ಬಾ ಭಾರಿ ಉರಿ ಬಿಸಿಲು
ಇತ್ತ ಕಡೆಯು ಅಯ್ಯಯ್ಯೋ ಎಲ್ಲೆಲ್ಲೂ ಕತ್ತಲು
ನಾವು ಆಸೆಗಳ ಅಲೆಯಲ್ಲಿ ತೇಲುವ ಮೀನುಗಳು
ಭ್ರಷ್ಟಾಚಾರದ ಭೂತಗಳಿಗೆ ನಾವಿಲ್ಲಿ ಕಾಮಧೇನುಗಳು
ಬದುಕಲು ಕಟ್ಟಿದ ಪುಟ್ಟದೊಂದು ಅರಮನೆಯೊಳು
ಕನಸುಗಳ ಕಟ್ಟಿಕೊಂಡು ಹಾರುವ ಪುಟ್ಟ ಹಕ್ಕಿಗಳು .. :)
|| ಪ್ರಶಾಂತ್ ಖಟಾವಕರ್ ||
No comments:
Post a Comment